ವಿರಾಜಪೇಟೆ:
ಕೇರಳದ ಉಳಿಕಲ್‍ನಲ್ಲಿರುವ ಶ್ರೀ ಆದಿ ಬೈತೂರ್ ಕಾಲಿಯಾರ್ ದೇವಸ್ಥಾನದ ವಾರ್ಷಿಕ ಉತ್ಸವವು ಪ್ರಾರಂಭವಾಗಿದ್ದು ಉತ್ಸವದ ಅಂಗವಾಗಿ ಶ್ರೀ ಭೂತಬಲಿ, ವೃಷಾಬಾಂಜಲಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಇನ್ನು 4 ದಿನಗಳ ಕಾಲ ಕೊಡಗಿನವರ ಉತ್ಸವ ನಡೆಯಲಿದ್ದು 24 ರಂದು ದೊಡ್ಡ ಹಬ್ಬ ನಡೆಯಲಿದೆ.

ಈ ಕುರಿತು ಬೈತೂರು ದೇವಾಲಯದ ಅರ್ಚಕರು ಮಾಹಿತಿ ನೀಡಿ ವಾರ್ಷಿಕ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗುತ್ತಿದ್ದು ಇದೀಗ ಶ್ರೀ ಭೂತಬಲಿ ಸೇವೆ, ಸಂಜೆ ವಿವೀದ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಪ್ರತಿದಿನ ದೇವರ ತಡಂಬು ನೃತ್ಯ ನಡೆಯಲಿದೆ. ಇನ್ನು 22 ರಿಂದ ಮೂರು ದಿನಗಳ ಕಾಲ ಕೊಡಗಿನವರ ಹಬ್ಬ ನಡೆಯಲಿದೆ. ಈ ಹಬ್ಬ ಕೊಡಗು ಮತ್ತು ಕೇರಳದದವರ ನಡುವೆ ವಿಶೇಷ ಬಾಂದವ್ಯವನ್ನು ಬೆಸೆದಿದೆ. ಕೊಡಗು ಹಾಗೂ ಕೇರಳದ ದೈವ ದೇವರುಗಳಿಗೆ ವಿಶೇಷ ಸಾಮ್ಯತೆಯಿದೆ. ಈ ಹಬ್ಬದಲ್ಲಿ ಪುಗ್ಗೇರ ಮನೆತನದವರು ವಿಶೇಷ ಸ್ಥಾನಮಾನ ಹೊಂದಿದವರಾಗಿದ್ದಾರೆ. ಕೊಡಗಿನಿಂದ ಆಗಮಿಸುವವರಿಗೆ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಗೌರವ ನೀಡಲಾಗುತ್ತದೆ. ಇನ್ನು ನಾಲ್ಕು ದಿನ ಹಬ್ಬ ಬಹಳ ವಿಜೃಂಬಣೆಯಿಂದ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬೈತೂರು ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಪುಗ್ಗೆರ ಪೊನ್ನಪ್ಪ ಮಾಹಿತಿ ನೀಡಿದ ಅವರು, ಜನವರಿ 22 (8 ಊಟ್)ರಂದು ಪುಗ್ಗೆರ ಕುಟುಂಬದ ಎತ್ತು ಪೋರಾಟ, ಅಕ್ಕಿ ಅಳೆಯುವುದು, 23 (9 ಊಟ್) ರಂದು ನಾಡಿನ ಎತ್ತು ಪೋರಾಟ ಅಕ್ಕಿ ಅಳೆಯುವುದು, ರಾತ್ರಿ 8.30 ಗಂಟೆಗೆ ಪುಗ್ಗೆರ ಕುಟುಂಬದ ವಿಶೇಷ ಪೂಜೆ, 9 ಗಂಟೆಗೆ ಬೇಟೆ ಕುರುಮಗನ್ ದೇವಸ್ಥಾನದಲ್ಲಿ ಒಂದು ಸಾವಿರ ತೆಂಗನಕಾಯಿ ಹೊಡೆಯುವುದು, 24 (10 ಊಟ್) ರಂದು ದೊಡ್ಡ ಹಬ್ಬ, ಅಪರಾಹ್ನ 2.30 ಗಂಟೆಗೆ ಆನೆ ಅಂಬಾರಿ ಪ್ರದಕ್ಷಿಣೆ, 25 (11ಊಟ್) ರಂದು ಪೂರ್ವಹ್ನ 9.30 ಗಂಟೆಗೆ ಕೊಡಗಿನ ಎಲ್ಲಾ ತಿರುವಳಕಾರರ ದರ್ಶನ ಹಾಗೂ ಬೈತೂರಪ್ಪ ದೇವರ ಆರ್ಶೀವಾದ ಕಾರ್ಯಕ್ರಮ ನಡೆಯಲಿದೆ ಎಂದರು.
ದೇವರ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನಿಂದ ಆಗಮಿಸಿ ದೇವರ ವಿವಿಧ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
✍️ರಜಿತಾ ಕಾರ್ಯಪ್ಪ.