ವಿದ್ಯುತ್ ಇಲಾಖೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸಲು ಮುಂದಾಗುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ರಾಜ್ಯ ರೈತ ಸಂಘವು ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲು ಸಿದ್ಧತೆ ನಡೆಸುತ್ತಿದೆ.- ಹೊಸೂರು ಕುಮಾರ್.
ರಾಜ್ಯ ಸರ್ಕಾರವು ನಮಗೆ ವಿದ್ಯುತ್ ಶಕ್ತಿ ಸೌಲಭ್ಯವನ್ನು ಒದಗಿಸುತ್ತಿದ್ದು ಈಗ ಖಾಸಗಿ ಸಂಸ್ಥೆಯಾದ ಟಾಟಾ ಕಂಪನಿಗೆ ಹಸ್ತಾಂತರಿಸುವ ಹುನ್ನಾರ ಅಥವಾ ಸಂಚು ನಡೆದಿದೆ ಈ ವ್ಯವಸ್ಥೆ ವಿರುದ್ಧ ಸಂಪೂರ್ಣ ರೈತಾಪಿ ಬಂಧುಗಳು ಒಗ್ಗಟ್ಟಿನಿಂದ ಒಂದಾಗಿ ತಡೆಗಟ್ಟಬೇಕಾಗಿದೆ ಎಂದರು.
ರಾಜ್ಯ ರೈತ ಸಂಘವು ಕಳೆದ 40 ವರ್ಷಗಳಿಂದ ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ವಿದ್ಯುತ್ ತಾರತಮ್ಯ ನೀತಿಯ ಬಗ್ಗೆ ಹೋರಾಟ ಮಾಡುತ್ತಾ ಬರುತ್ತಿದ್ದು ಹಾಗೂ ವಿದ್ಯುಚ್ಚಕ್ತಿ ಉಚಿತವಾಗಿ ಪಡೆದುಕೊಳ್ಳಲು ಹೋರಾಟದಲ್ಲಿ ಯಶಸ್ವಿಗೊಳಿಸಿದರು. ವಿದ್ಯುಚ್ಛಕ್ತಿ ಪಡೆಯಲು 2-3 ವರ್ಷಗಳೇ ಕಳೆದರೂ ವಿದ್ಯುಚ್ಛಕ್ತಿ ಸಂಪರ್ಕ ಪಡೆಯಲು ರೈತರು ಹೆಣಗಾಡಬೇಕಾಗಿದ್ದು, ಈ ಸಂದರ್ಭದಲ್ಲಿ ರೈತ ಸಂಘಟನೆಯ ಘೋಷಣೆಯಿಂದಾಗಿ ತಾವೇ ಬಂಡವಾಳವನ್ನು ಹೂಡಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವ ಶಕ್ತಿಯನ್ನು ಸಂಘಟನೆಯಿಂದ ಪಡೆದುಕೊಳ್ಳಲಾಗಿತ್ತು. ರಾಜ್ಯಕ್ಕೆ ಮತ್ತು ಕೇಂದ್ರಕ್ಕೆ ಬೇಕಾದಂತಹ ಕೃಷಿ ಉತ್ಪನ್ನಗಳನ್ನು ಪಂಪ್ಸೆಟ್ ಮೂಲಕ ಆಹಾರದ ಕೊರತೆಯಿಲ್ಲದಂತೆ ಉತ್ಪಾದನೆ ಮಾಡುತ್ತಿರುವ ರೈತರಿಗೆ ನ್ಯಾಯಯುತವಾದ ಮಾರುಕಟ್ಟೆ ಬೆಲೆ ದೊರೆಯದ ಕಾರಣ ದಿವಂಗತ ಎಂ.ಡಿ. ನಂಜುಂಡಸ್ವಾಮಿ ರವರ ನೇತೃತ್ವದ ಹೋರಾಟದಲ್ಲಿ ವೈಜ್ಞಾನಿಕ ಬೆಲೆ ನಮಗೆ ಸಿಗುವವರೆಗೆ ವಿದ್ಯುಚ್ಚಕ್ತಿ ಬಿಲ್ಲನ್ನು ಕಟ್ಟುವುದಿಲ್ಲವೆಂಬ ಘೋಷಣೆ ಮೂಲಕ ಲಕ್ಷಾಂತರ ರೂ. ಗಳ ವಿದ್ಯುಚ್ಛಕ್ತಿಯ ಬಿಲ್ಲನ್ನು ಮನ್ನಾ ಮಾಡಲಾಯಿತು.

ತದನಂತರ ಬಂದು ಹೋದ ಸರ್ಕಾರಗಳು ರೈತರಿಗೆ ವೈಜ್ಞಾನಿಕ ಬೆಲೆ ಕೊಡುವಲ್ಲಿ ವಿಫಲವಾಗಿದ್ದು, ವಿದ್ಯುಚ್ಚಕ್ತಿಯೂ ಸಹ ಸಮರ್ಪಕವಾಗಿ ವಿತರಣೆ ಮಾಡದೇ ರೈತರಿಗೆ ತಾನು ಬೆಳೆದ ಬೆಳೆಯ ಫಸಲನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿಯೂ ಕೂಡ ಇತ್ತೀಚಿನ ದಿನಗಳಲ್ಲಿ ವಿದ್ಯುಚ್ಚಕ್ತಿಯ ಟ್ರಾನ್ಸ್ ಫಾರ್ಮರ್ಗಳನ್ನು ಇಲಾಖೆಯಿಂದ ಅಳವಡಿಸಿಕೊಳ್ಳಲಾಗದೆ ಖಾಸಗಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸುವ ನಿಯಮವನ್ನು ತಂದಿರುತ್ತಾರೆ. ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಇದ್ದರೂ ಕೂಡ ಸಾರ್ವಜನಿಕರ ಸಂಸ್ಥೆಯು ಸುಧಾರಿಸಬೇಕಾದ ಸರ್ಕಾರವು ಜವಾಬ್ದಾರಿಯಿಂದ ಆಲೋಚನೆ ಮಾಡದೆ ಏಕಾಏಕಿ ವಿದ್ಯುಚ್ಛಕ್ತಿ ಖಾಸಗೀಕರಣ ಮಾಡುತ್ತಿರುವುದು ದುರಾದೃಷ್ಟ ಕರವಾಗಿರುತ್ತದೆ. ಆದರೆ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ತೀರ್ಮಾನದಿಂದ ಸಾರ್ವಜನಿಕ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಮೂಲಕ ಕೃಷಿ ಕ್ಷೇತ್ರದ ಆಹಾರ ಉತ್ಪಾದನೆಯ ಮೇಲೆ ಗಂಡಾಂತರ ತರುವ ತೀರ್ಮಾನವನ್ನು ತೆಗೆದುಕೊಳ್ಳುವುದನ್ನು ಸಂಘವು ಸಂಪೂರ್ಣ ವಿರೋಧಿಸುತ್ತದೆ.
ಈ ತೀರ್ಮಾನದಿಂದಾಗಿ, ಕರೆಂಟ್ ದರ ಏರಿಕೆ ಖಚಿತ, ʼಗೃಹಜ್ಯೋತಿʼ ಯೋಜನೆ ಬಂದ್, ನೇಮಕಾತಿಯಲ್ಲಿ ಮೀಸಲಾತಿ ರದ್ದು, ಗ್ರಾಮಗಳ ಸಂಪೂರ್ಣ ನಿರ್ಲಕ್ಷ್ಯ, ಕೋಟ್ಯಾಂತರ ರೂಪಾಯಿಗಳ ಸಾರ್ವಜನಿಕರ ಆಸ್ತಿ ಖಾಸಗಿ ಪಾಲಾಗುವ ಹುನ್ನಾರವಾಗಿರುತ್ತದೆ. ಆದ್ದರಿಂದ ದೇಶದ ಬೆನ್ನೆಲುಬು ಎನಿಸಿಕೊಂಡ ನಮ್ಮ ರೈತಾಪಿ ಬಂಧುಗಳೇ ಬಹಳ ಗಂಭೀರವಾದ ಸಮಸ್ಯೆ ಎದುರಾಗಲಿದ್ದು, ನಮಗೆ ವಿದ್ಯುಚ್ಛಕ್ತಿ ಸೌಲಭ್ಯವನ್ನು ಒದಗಿಸುತ್ತಿರುವ ಸರ್ಕಾರ ಈಗ ಖಾಸಗಿ ಸಂಸ್ಥೆಯಾದ ಟಾಟಾ ಕಂಪನಿಗೆ ಹಸ್ತಾಂತರಿಸುವ ಹುನ್ನಾರ ಅಥವಾ ಸಂಚು ನಡೆದಿರುವ ವ್ಯವಸ್ಥೆಯ ವಿರುದ್ಧ ಸಂಪೂರ್ಣ ರೈತಾಪಿ ಬಂಧುಗಳು ಒಗ್ಗಟ್ಟಿನಿಂದ ಒಂದಾಗಿ ರಾಜ್ಯಾದ್ಯಂತ ಜಾಗೃತಿ ಮೂಡಿಸುವ ಮೂಲಕ ರಾಜ್ಯವ್ಯಾಪಿ ಹೋರಾಟ ರೂಪಿಸಲು ಎಲ್ಲಾ ಹೋರಾಟಗಾರರು, ರೈತ ಬಂಧುಗಳು, ನಾಗರೀಕರು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆಗೆ ತಾವೆಲ್ಲರೂ ಭಾಗಿಯಾಗಬೇಕೆಂದು ರೈತರಿಗೆ ಮನವಿ ಮಾಡಿದ್ದಾರೆ.