One Tap News - Kannada News Daily

Header
collapse
...
Home / Kodagu / ಶ್ರೀ ಆದಿ ಬೈತೂರು ದೇವಾಲಯದಲ್ಲಿ ವಿಜೃಂಭಣೆಯಿಂದ ಪ್ರಾರಂಭಗೊಂಡ ಜಾತ್ರೋತ್ಸವ

ಶ್ರೀ ಆದಿ ಬೈತೂರು ದೇವಾಲಯದಲ್ಲಿ ವಿಜೃಂಭಣೆಯಿಂದ ಪ್ರಾರಂಭಗೊಂಡ ಜಾತ್ರೋತ್ಸವ

2026-01-25  Kodagu Desk  22 views
ಶ್ರೀ ಆದಿ ಬೈತೂರು ದೇವಾಲಯದಲ್ಲಿ ವಿಜೃಂಭಣೆಯಿಂದ ಪ್ರಾರಂಭಗೊಂಡ ಜಾತ್ರೋತ್ಸವ

 

ವಿರಾಜಪೇಟೆ:

 ಶ್ರೀ ಆದಿ ಬೈತೂರು(ವಾಯತ್ತೂರು ಕಾಲಿಯಾರ್ ಶ್ರೀ ಶಿವ ಕ್ಷೇತ್ರ)ವಿನಲ್ಲಿ ಕೊಡಗು ಕೇರಳ ದೈವ ಸಂಬಂಧದ ಬೈತೂರು ಹಬ್ಬದ ಮೂರನೇ ದಿನದ ಆಚರಣೆ ಭಕ್ತಿಯಿಂದ ನಡೆಯಿತು. ದೇವಾಲಯದ ತಕ್ಕರಾದ ಪುಗ್ಗೇರ ಪೊನ್ನಪ್ಪ ಅವರ ಮುಂದಾಳತ್ವದಲ್ಲಿ ವಿವಿಧ ಆಚರಣೆಗಳು ನಡೆಯಿತು.

  ಹಬ್ಬದ ಅಂಗವಾಗಿ ಬೆಳಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯಿತು. ದೇವರಿಗೆ ನೈವೇದ್ಯ ಅರ್ಪಣೆ, ತುಪ್ಪಾಭಿಷೇಕ, ಕೊಡಗಿನ ಸಾಂಪ್ರಾದಾಯಿಕ ನೃತ್ಯ ಪ್ರದರ್ಶನ ನಡೆಯಿತು. ಮದ್ಯಾಹ್ನ ಮಹಾಪೂಜೆ ಬಳಿಕ ಆನೆ ಅಂಬಾರಿ ಮೂಲಕ ದೇವರ ದರ್ಶನ, ತಡಂಬು ನೃತ್ಯ(ಉತ್ಸವ ಮೂರ್ತಿ) ಕೊಡವ ಸಮಾಜದ ವತಿಯಿಂದ ಬೊಳಕಾಟ್, ಉಮ್ಮತ್ತಾಟ್ ಪ್ರದರ್ಶನ ನಡೆಯಿತು.

1002081403.jpg

   ಇಂದು ದೊಡ್ಡ ಹಬ್ಬ ನಡೆಯಲಿದ್ದು ಬೆಳಿಗ್ಗೆ 9 ಗಂಟೆಗೆ ತಿರುವಳಕಾರರು(ಮೈಮೇಲೆ ದೇವರು ಬರುವವರು)ಹೊಳೆಗೆ ಸ್ನಾನಕ್ಕೆ ತೆರಳುತ್ತಾರೆ. ಅದೇ ವೇಳೆ ಕೊಡಗಿನ ದೇವರುಗಳ ದರ್ಶನ, ತಿರುವಳಕಾರರು ಆಯುಧ ಹೊತ್ತು ಕುಣಿಯುತ್ತಾರೆ. ಬಳಿಕ ನೈವೇದ್ಯ ಅರ್ಪಣೆ, ಪ್ರಸಾದ ಸ್ವೀಕಾರ ನಡೆಯಲಿದೆ. 26 ರಂದು ಆರಾಟ್ ಉತ್ಸವ ನಡೆಯಲಿದೆ.

    ಶ್ರೀ ವಾಯತೂರು ಕಾಲಿಯಾರ್ ದೇವಸ್ಥಾನವು ಉತ್ತರ ಮಲಬಾರ್‍ನ ಅತ್ಯಂತ ಪ್ರಮುಖ ದೇವಾಲಯವಾಗಿದ್ದು, ಕೊಡಗು ಬೆಟ್ಟಗಳ ತಪ್ಪಲಿನಲ್ಲಿರುವ ವಾಯತೂರಿನಲ್ಲಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಪ್ರಾಚೀನ ದೇವಾಲಯದಲ್ಲಿ, ಪಾರ್ವತಿ ದೇವಿಯ ಚೈತನ್ಯ ವಿಗ್ರಹವನ್ನು ಅದೇ ಗರ್ಭಗುಡಿಯಲ್ಲಿ ಪೂಜಿಸಲಾಗುತ್ತದೆ. ಅರ್ಜುನನಿಗೆ ಪಾಶುಪತಾಸ್ತ್ರವನ್ನು ನೀಡಿದ ಪಾರ್ವತಿ ದೇವಿಯ ಪತಿ ಕಿರಾತಮೂರ್ತಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಸಾವಿರಾರು ಎಕರೆ ಭೂಮಿಯನ್ನು ಹೊಂದಿದ್ದ ವಾಯತೂರು ದೇವಸ್ವಂನಲ್ಲಿ ಪ್ರತಿ ವರ್ಷ ಭಕ್ತರು ಮತ್ತು ರೈತರು ಅರ್ಪಿಸುವ ಅಕ್ಕಿ ಮತ್ತು ತರಕಾರಿಗಳನ್ನು ಬಳಸಿ ನಡೆಸುವ ಅನ್ನದಾನವು ಪ್ರಾಚೀನ ಕಾಲದಿಂದಲೂ ವಾಯತೂರು ಊಟು ಎಂಬ ಹೆಸರಿನಲ್ಲಿ ಬಹಳ ಪ್ರಸಿದ್ಧವಾಗಿರುವುದರಿಂದ ಎರಡು ದಿನಗಳ ಕಾಲ ಎತ್ತು ಪೋರಾಟ್ ಹಾಗೂ ಅಕ್ಕಿ ಅಳೆಯುವುದರ ಮೂಲಕ ಆಚರಣೆ ನಡೆಯಿತು.

  ದೇವಾಲಯದಲ್ಲಿ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳೊಂದಿಗೆ ಮಲಯಾಳಿಗಳು ಮತ್ತು ಕೊಡಗಿನ ನಿವಾಸಿಗಳು ಒಂದೇ ಬಾರಿಗೆ ಸೇರಿದ್ದರು. ಮಕರಂ 10ರ ಹಬ್ಬವು ಈ ದೇವಾಲಯದಲ್ಲಿ ಊಟು ಉತ್ಸವದ ಪ್ರಮುಖ ಭಾಗವಾಗಿ ಇದೀಗ ದೇವಸ್ಥಾನದಲ್ಲಿ ಕೊಡಗಿನ ಭಕ್ತರಿಂದ ತುಂಬಿ ತುಳುಕುತ್ತಿದೆ.

    ದೇವಸ್ಥಾನದಲ್ಲಿ ತಂತ್ರಿ ಬ್ರಹ್ಮಶ್ರೀ ಎಡವಲತ್, ಪುತಯೂರು ಮಣಕ್ಕಲ್ ಕುಬೇರನ್ ನಂಬೂತಿರಿಪಾಡ್ ಅವರ ಮಾರ್ಗದರ್ಶನದಲ್ಲಿದ್ದು, ದೇವಸ್ಥಾನದ ತಕ್ಕರಾದ ಪುಗ್ಗೇರ ಪೆÇನ್ನಪ್ಪ ಮತ್ತು ರತೀಶ್ ನಂಬೂದಿರಿ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯುತ್ತಿದೆ. ದೇವಸ್ಥಾನದ ಮುಖ್ಯ ಅರ್ಚಕ ಪ್ರಸನ್ನನ್ ನಂಬೂದಿರಿ ತಡಂಬು ನೃತ್ಯ ಮಾಡಿದರು.

  ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ತೆರಳಿ ಉತ್ಸವಕ್ಕೆ ಸಾಕ್ಷಿಯಾದರು. ಈ ಸಂದರ್ಭ ಪುಗ್ಗೇರ ಕುಟುಂಬದವರು, ಭಕ್ತಜನ ಸಂಘದ ಸದಸ್ಯರು, ನಾಡಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

✍️ರಜಿತ ಕಾರ್ಯಪ್ಪ.

 


Share: