ಮೈಸೂರು.
ಮೈಸೂರು ನಗರದ ಹೃದಯಭಾಗವಾದ ವಸ್ತುಪ್ರದರ್ಶನದ ಆವರಣದಲ್ಲಿ ಇತ್ತೀಚೆಗೆ ಅತ್ಯಾಚಾರಕ್ಕೆ ಒಳಗಾಗಿ ಭೀಕರವಾಗಿ ಕೊಲೆಯಾದ ನಿರ್ಗತಿಕ ಅಲೆಮಾರಿ ಸಮುದಾಯದ 10 ವರ್ಷದ ಬಾಲಕಿಯ ಕುಟುಂಬಕ್ಕೆ ಮಾಜಿ ಸಚಿವರಾದ ಸಾ.ರಾ ಮಹೇಶ್ ರವರ ಪುತ್ರ ಜಯಂತ್ ರವರಿಂದ 1 ಲಕ್ಷ ಡಿ.ಡಿ ಚೆಕ್ಕನ್ನು ದಿನಾಂಕ : 13-10-2025 ರ ಸೋಮವಾರ ಮೈಸೂರಿನ ಸಾ.ರಾ. ಮಹೇಶ್ ರವರ ಸಾರಾ ಫಾರಂನಲ್ಲಿ (ತೋಟ) ದಸಂಸದ ಜಿಲ್ಲಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿಯವರಿಗೆ ಆ ನೊಂದ ಅಲೆಮಾರಿ ಕುಟುಂಬಕ್ಕೆ ತಲುಪಿಸುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾ.ರಾ ಮಹೇಶ್ ರವರು ಮಾತನಾಡಿ ದಸರಾ ಉದ್ದೇಶದಿಂದ ಬಲೂನ್ ಮಾರಾಟ ಮಾಡಿ ಹೊಟ್ಟೆ ಹೊರೆಯಲು ಗುಲ್ಬರ್ಗಾದಿಂದ ಮೈಸೂರಿಗೆ ಬಂದಿದ್ದ ಅಲೆಮಾರಿ ಸಮುದಾಯದ ಕುಟುಂಬವೊಂದರ 10 ವರ್ಷದ ಬಾಲಕಿಯ ಮೇಲೆ ವಸ್ತುಪ್ರದರ್ಶನದ ಆವರಣದಲ್ಲೇ ಅತ್ಯಾಚಾರವೆಸಗಿ ಭೀಕರವಾಗಿ ಕೊಲೆ ಮಾಡಿರುವ ಘಟನೆಯು ನನ್ನ ಮನಸ್ಸಿಗೆ ತುಂಬಾ ಘಾಸಿಗೊಳಿಸಿದೆ. ಆ ಬಾಲಕಿಯ ಮೇಲೆ ನಡೆದ ಭೀಕರ ಕ್ರೌರ್ಯ ಘಟನೆಯಿಂದಾಗಿ ನನಗೆ ಅನೇಕ ರಾತ್ರಿಗಳು ನಿದ್ದೆ ಬಾರದೆ ಚಡಪಡಿಸಿದ್ದೇನೆ. ಇದು ಅತ್ಯಂತ ಹೀನ ಕೃತ್ಯವಾಗಿದ್ದು, ಹೊಟ್ಟೆಪಾಡಿಗಾಗಿ ಬಂದ ಕುಟುಂಬದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಅಲೆಮಾರಿ ಕುಟುಂಬದ ಬಾಲಕಿಗೆ ಆದ ಘೋರ ದುರ್ಘಟನೆಯು ಯಾರಿಗೂ ಬಾರದಿರಲಿ ಎಂದು ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ.
ಬಾಲಕಿಯನ್ನು ಕಳೆದುಕೊಂಡು ಅನಾಥವಾಗಿರುವ ಅಲೆಮಾರಿ ಕುಟುಂಬಕ್ಕೆ ನನ್ನ ಎರಡನೇ ಪುತ್ರ ಎಸ್ ಎಂ ಜಯಂತ್ ಒಡೆತನದಲ್ಲಿ ಫಾರಂನಲ್ಲಿ ಸಾಕಿರುವ ರೊಲೆಕ್ಸ್ ಕುದುರೆಗೆ ಇಂಡಿಯಾದ ನಂ. 1 ಚಾಂಪಿಯನ್ ಅವಾರ್ಡ್ ಸಿಕ್ಕಿದ್ದು ಈ ಆವಾರ್ಡ್‌ನಿಂದ ಬಂದ 1 ಲಕ್ಷ ಬಹುಮಾನವನ್ನು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಕುಟುಂಬಕ್ಕೆ ಡಿ.ಡಿ. ಮೂಲಕ ಸಹಾಯ ಮಾಡುತ್ತಿರುವ ನನ್ನ ಮಗನ ನಿರ್ಧಾರವನ್ನು ನಾನು ಹೆಮ್ಮೆ ಪಡುತ್ತೇನೆ ಎಂದರು.
ದಸಂಸ ಜಿಲ್ಲಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು 1 ಲಕ್ಷದ ಡಿ.ಡಿ ಚೆಕ್ಕನ್ನು ಸ್ವೀಕರಿಸಿ ಮಾತನಾಡಿ ಸಾ.ರಾ ಮಹೇಶ್ ರವರ ಪುತ್ರರಾದ ಜಯಂತ್ ರವರು ತಾವು ಸಾಕಿದ ಕುದುರೆಗೆ ಬಂದಿದ್ದ ಬಹುಮಾನದ 1 ಲಕ್ಷ ರೂ. ಗಳನ್ನು ಬಾಲಕಿಯನ್ನು ಕಳೆದುಕೊಂಡ ನಿರ್ಗತಿಕ ಅಲೆಮಾರಿ ಕುಟುಂಬಕ್ಕೆ ಕೊಡುತ್ತಿರುವ ನಿರ್ಧಾರವು ಅತ್ಯಂತ ಮಾನವೀಯತೆಯಿಂದ ಕೂಡಿದೆ. ದಸರಾ ಸಂದರ್ಭದಲ್ಲಿ ಹೊಟ್ಟೆಪಾಡಿಗಾಗಿ ಬಲೂನ್ ಮಾರಾಟ ಮಾಡಿಕೊಂಡು ಜೀವನ ಸಾಗಿಸಲು ಬಂದಿದ್ದ ಅಲೆಮಾರಿ ಕುಟುಂಬದ ಬಾಲಕಿಗೆ ಈ ರೀತಿಯ ಘನ ಘೋರ ಘಟನೆಯು ಮನುಕುಲವೇ ತಲೆ ತಗ್ಗಿಸುವಂತಿದೆ. ಮೈಸೂರು ಜಿಲ್ಲಾಢಳಿತ ದಸರಾ ಸಂದರ್ಭದಲ್ಲಿ ಇಂತಹ ಅಲೆಮಾರಿ ನಿರ್ಗತಿಕ ಸಮುದಾಯಗಳಿಗೆ ತಾತ್ಕಾಲಿಕವಾಗಿ ಛತ್ರಗಳನ್ನು ಕಾಯ್ದಿರಿಸಿ ಆಶ್ರಯ ನೀಡಿ ನೋಡಲ್ ಅಧಿಕಾರಿಗಳನ್ನು ಉಸ್ತುವಾರಿ ನೋಡಿಕೊಳ್ಳುವಂತೆ ಮೈಸೂರು ಜಿಲ್ಲಾಢಳಿತ ಆ ತಂಗುದಾಣದಲ್ಲಿ ಊಟ, ತಿಂಡಿ, ನೀರಿನ ವ್ಯವಸ್ಥೆಯನ್ನು ಭರಿಸಿ ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ಕ್ರಮ ವಹಿಸಬೇಕಾಗಿತ್ತು. ಆದರೆ ಜಿಲ್ಲಾಢಳಿತದಿಂದ ಆಗದೆ ಇದ್ದುದರಿಂದ ಇಂತಹ ಹೇಯ ಘಟನೆಗಳು ನಡೆಯಲು ಕಾರಣವಾಗಿದೆ ಮತ್ತು ಬಾಲಕಿಯನ್ನು ಕಳೆದುಕೊಂಡ ಗುಲ್ಬರ್ಗಾ ಮೂಲದ ಅಲೆಮಾರಿ ಕುಟುಂಬಕ್ಕೆ ಸರ್ಕಾರ ವಿಶೇಷವಾಗಿ ಪರಿಹಾರವನ್ನು ಕಲ್ಪಿಸಿಕೊಡಬೇಕಾಗಿತ್ತು. ಆದರೆ ಸಾ.ರಾ. ಮಹೇಶ್ ರವರ ಕುಟುಂಬವು ಇಂತಹ ನಿರ್ಗತಿಕ ಅಲೆಮಾರಿ ಕುಟುಂಬದ ಸಾವಿನ ಮನೆಗೆ 1 ಲಕ್ಷ ರೂ. ಗಳ ಪರಿಹಾರವನ್ನು ದಸಂಸದ ಮೂಲಕ ಕೊಡುತ್ತಿರುವುದು ಇವರ ಮಾತೃ ಹೃದಯವನ್ನು ತೋರಿಸುತ್ತದೆ. ಸಾ. ರಾ ಮಹೇಶ್ ರವರ ಕುಟುಂಬಕ್ಕೆ ಮೈಸೂರು ಜಿಲ್ಲೆಯ ದಲಿತ ಸಮುದಾಯಗಳ ಪರವಾಗಿ ಮೈಸೂರು ದಸಂಸವು ಅಭಿನಂದನೆಯನ್ನು ಸಲ್ಲಿಸುತ್ತದೆ. ಸಾ. ರಾ ಮಹೇಶ್ ರವರ ಕುಟುಂಬವು ಕೊಟ್ಟಿರುವ 1 ಲಕ್ಷಗಳ ಡಿ.ಡಿ. ಚೆಕ್ಕನ್ನು ಗುಲ್ಬಾರ್ಗಾದಲ್ಲಿ ನೆಲೆಸಿರುವ ನೊಂದ ಅಲೆಮಾರಿ ಕುಟುಂಬಕ್ಕೆ ದಸಂಸದ ನಿಯೋಗದ ವತಿಯಿಂದ ಕೂಡಲೇ ತಲುಪಿಸಿ ಆ ಕುಟುಂಬಕ್ಕೆ ಸಾಂತ್ವಾನ ಹೇಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಾ.ರಾ. ಮಹೇಶ್ ರವರ ಪುತ್ರರಾದ ಡಾ|| ಧನುಶ್, ಜಯಂತ್ ಮತ್ತು ದಸಂಸದ ಕೆ. ನಂಜಪ್ಪ ಬಸವನಗುಡಿ ಹಾಜರಿದ್ದರು.